ವೀರಶೈವ ಧರ್ಮದ ಪಂಚ ಮಹಾಪೀಠಗಳು
ಪಂಚಪೀಠಗಳು ವೀರಶೈವ ಧರ್ಮದ ಪ್ರಚಾರಕ್ಕಾಗಿ ಶಿವನ ಐದು ಮುಖಗಳಿಂದ ಉದ್ಭವಿಸಿದ ಪಂಚಾಚಾರ್ಯರು ಸ್ಥಾಪಿಸಿದ ಐದು ಪುರಾತನ ಮಠಗಳಾಗಿವೆ.
ವೀರ ಸಿಂಹಾಸನ ಪೀಠ
ರಂಭಾಪುರಿ
ಸ್ಥಾಪನೆ: ಜಗದ್ಗುರು ರೇಣುಕಾಚಾರ್ಯ
🔱 ಸೋಮೇಶ್ವರ ಲಿಂಗ
📍 ಬಾಳೆಹೊನ್ನೂರು, ಚಿಕ್ಕಮಗಳೂರು
ಸದ್ಧರ್ಮ ಸಿಂಹಾಸನ ಪೀಠ
ಉಜ್ಜಯಿನಿ
ಸ್ಥಾಪನೆ: ಜಗದ್ಗುರು ಮರುಳಸಿದ್ದೇಶ್ವರ (ದಾರುಕಾಚಾರ್ಯ)
🔱 ಸಿದ್ದೇಶ್ವರ ಲಿಂಗ
📍 ಉಜ್ಜಯಿನಿ, ಕುಡ್ಲಿಗಿ, ವಿಜಯನಗರ
ವೈರಾಗ್ಯ ಸಿಂಹಾಸನ ಪೀಠ
ಕೇದಾರ
ಸ್ಥಾಪನೆ: ಜಗದ್ಗುರು ಏಕೋರಾಮಾರಾಧ್ಯ
🔱 ಕೇದಾರ ಲಿಂಗ
📍 ಕೇದಾರನಾಥ್, ಉತ್ತರಾಖಂಡ
ಸೂರ್ಯ ಸಿಂಹಾಸನ ಪೀಠ
ಶ್ರೀಶೈಲ
ಸ್ಥಾಪನೆ: ಜಗದ್ಗುರು ಪಂಡಿತಾರಾಧ್ಯ
🔱 ಮಲ್ಲಿಕಾರ್ಜುನ ಲಿಂಗ
📍 ಶ್ರೀಶೈಲಂ, ಆಂಧ್ರಪ್ರದೇಶ
ಜ್ಞಾನ ಸಿಂಹಾಸನ ಪೀಠ
ಕಾಶಿ
ಸ್ಥಾಪನೆ: ಜಗದ್ಗುರು ವಿಶ್ವಾರಾಧ್ಯ
🔱 ವಿಶ್ವೇಶ್ವರ ಲಿಂಗ
📍 ವಾರಣಾಸಿ (ಕಾಶಿ)
ಪಂಚಪೀಠಗಳು
ಭಾರತ ಮಣ್ಯಭೂಮಿಯಲ್ಲಿ ಯಾವುದೇ ಧರ್ಮದ ಹುಟ್ಟಿನ ಮೂಲ ಉದ್ದೇಶ ಆಯಾ ಜನಸಮುದಾಯದ ಸಂಸ್ಕೃತಿಯನ್ನು ವಿಕಾಸಗೊಳಿಸುವುದೇ ಆಗಿದೆಯೇ ಹೊರತು ವಿಕಾರಗೊಳಿಸುವುದಲ್ಲ. ಆದರ್ಶವನ್ನು ಧರ್ಮ ಹೇಳಿದರೆ, ಬದುಕು ಹೀಗಿದೆಯೆಂಬ ವಾಸ್ತವವನ್ನು ಸಂಸ್ಕೃತಿ ತಿಳಿಸುತ್ತದೆ. ಮಾನವ ಜೀವನದ ಜೀವಾಳ ಧರ್ಮ, ನಿಜವಾದ ಆಚರಣೆ ಧರ್ಮವೆಂದು ಕರೆಯಿಸಿಕೊಳ್ಳುತ್ತದೆ. ಇಹ ಮತ್ತು ಪರದಲ್ಲಿ ಸಿದ್ಧಿಯನ್ನಿಡುವುದೇ ಧರ್ಮ, ಆಧ್ಯಾತ್ಮ ಪ್ರವೃತ್ತಿ, ಸನ್ಮಾರ್ಗ ನಡತೆ ಧರ್ಮ ಸಾಧನೆಯ ಅಡಿಗಲ್ಲು, ಅಂತೆಯೇ "ಧರ್ಮಂ ಚರ' ಎಂದು ಸಾರಿದೆ ಉಪನಿಷತ್ತು.
ಧರ್ಮದಿಂದ ದೂರವಾದ ಅರ್ಥ, ಕಾಮನೆಗಳು ಊರ್ಜಿತಗೊಳ್ಳಲಾರವು. ಇವು ಧರ್ಮದ ಚೌಕಟ್ಟಿನಲ್ಲಿ ಬೆಳೆದಾಗ ನಿಜವಾದ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಬದುಕನ್ನು ತಿದ್ದುವ, ಬಾಳನ್ನು ಹಸನುಗೊಳಿಸುವ, ಜೀವನ ಪಾವನಗೊಳಿಸುವ ಕೆಲಸ ಧರ್ಮದ್ದು. ಇಂತಹ ಗುಣಾದರ್ಶಗಳಿರುವ ಧರ್ಮ ಯಾರಿಗೆ ಬೇಡ, ಅಹಿಸಾಂದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿದ ಹಿರಿಮೆ ವೀರಶೈವದ್ದು.
ಕುರುಡನಿಗೂ ಮುನ್ನಡೆಯಲು ಊರುಗೋಲು ಬೇಕು. ಅದಿಲ್ಲದೇ ಆತ ಮುನ್ನಡೆಯಲಾರ. ಗುರುವಿನ ಅಂತರಾತ್ಮದ ಸೂಕ್ಷ್ಮ ಸಂವೇದನಾಶೀಲ ಬಲದಿಂದ ಕುರುಡನನ್ನೂ ಮುನ್ನಡೆಸುವುದೇ ಗುರುವಿನ ಕರುಣಾಮೃತ, ಅದರಂತೆ ಬದುಕಿನ ಭವಸಾಗರ ದಾಟಲು ಗುರುಬೋಧಾಮೃತದ ಬೆಳಕು ಬೇಕೇ ಬೇಕು. ಇದನ್ನು ಅರಿಯುವುದಕ್ಕಾಗಿಯೇ ವೀರಶೈವ ಧರ್ಮ ಸಿದ್ಧಾಂತವು ಸಾಧನೆಯಲ್ಲಿ ದೈತವನ್ನು ಅಂತ್ಯದಲ್ಲಿ ಅದ್ಭತವನ್ನು ಸಾರುತ್ತದೆ. ಜ್ಞಾನ ಮತ್ತು ಕ್ರಿಯೆಗಳ ಆಚರಣೆಯಿಂದ ಜೀವನದ ಉನ್ನತಿ ಸಾಧ್ಯವೆಂದು ಸಾರಿದ ಶ್ರೇಯಸ್ಸು ವೀರಶೈವ ಧರ್ಮಕ್ಕೆ ಸಲ್ಲುತ್ತದೆ.
ಬಹು ಪ್ರಾಚೀನವಾದ ವೀರಶೈವ ಧರ್ಮವು ಇತಿಹಾಸ ಪ್ರಸಿದ್ಧವಾಗಿದೆ. ಶ್ರೀ ಜಗದಾದಿ ಜಗದ್ಗುರು ಪಂಚಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಉತ್ಕೃಷ್ಟ ಸ್ಥಾನಕ್ಕೇರಿಸಿದ್ದಾರೆ. ಭಕ್ತಿ-ಜ್ಞಾನ ಕ್ರಿಯೆಗಳ ಸಮೂಹದಂತಿರುವ ವೀರಶೈವ ಧರ್ಮವು, ಉನ್ನತ ವಿಚಾರಗಳನ್ನು ಹೊಂದಿದೆ. ಇಂತಹ ಅತ್ಯಮೂಲ್ಯವಾದ ಧರ್ಮವನ್ನು ನಾಡಿಗೆ ಕೊಟ್ಟ ಹೆಗ್ಗಳಿಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ. ಆದುದರಿಂದ ವೀರಶೈವ ಧಾರ್ಮಿಕ-ದಾರ್ಶನಿಕ ಇತಿಹಾಸದಲ್ಲಿ ಪಂಚಾಚಾರ್ಯರಿಗೆ ಪ್ರಥಮ ಸ್ಥಾನವಿದೆ.
ವೀರಶೈವ ಧರ್ಮವು ಲೋಕದೊಡೆಯ, ಕ್ರಿಯಾಕರ್ತ, ಲಯಕರ್ತ. ಕೈಲಾಸಪತಿ, ಗಿರಿಜಾಪತಿ, ಗಜಚರ್ಮಾಂಬರಧರನಾದ ಪರಶಿವನಿಗೆ ಪಂಚಮುಖಗಳೆಂದು ಒಪ್ಪಿಕೊಳ್ಳುತ್ತದೆ. ಅವುಗಳೆಂದರೆ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಹೀಗೆ ಈ ಐದೂ ಮುಖಗಳಲ್ಲಿ ಒಂದೊಂದು ಮುಖದಿಂದ, ಒಂದೊಂದು ಯುಗದಲ್ಲಿ ಪಂಚಾಚಾರ್ಯರು ಬೇರೆ ಬೇರೆ ಸುನಾಮಗಳಿಂದ ಅವತರಿಸಿದರೆಂದು ಒಪ್ಪಿಕೊಳ್ಳುತ್ತವೆ. ಲಿಂಗಮುಖರಾಗಿ ಉದ್ಭವಿಸಿದ ಆಚಾರ್ಯರು ಜಂಗಮ ರೂಪಾಗಿ ಜಗದ ಜಂಜಡವನ್ನು ಕಳೆದಿರುವರು. ಅವರ ಪರಮ ಪಂಚಪೀಠಗಳ ಪ್ರಾಪ್ತ ಪ್ರಾಚೀನತೆಯಿಂದ ಸುಪ್ತ ಪ್ರಸ್ತುತವರೆಗಿನ ಚಾರಿತ್ರ್ಯವನ್ನು ಇಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸಬಹುದಾಗಿದೆ.
ಪರಶಿವನಾದೇಶದಂತೆ ಆತನ ಪಂಚಮುಖಗಳಿಂದ ಆವೀರ್ಭವಿಸಿದ ಆದಿ. ಆಚಾರ್ಯರು ಭೂಲೋಕದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಪ್ರಕಟಗೊಂಡರೆಂಬುದರ ಬಗ್ಗೆ ಶಿವಾಗಮಗಳಲ್ಲಿ ಉಕ್ತವಾಗಿರುವುದನ್ನು ಕಾಣಬಹುದಾಗಿದೆ.
ಸಿದ್ಧಾಂತಾಖ್ಯೆ ಮಹಾತಂತ್ರೆ ಕಾಮಿಕಾದೆ ಶಿವೋದಿತೇ |
ನಿರ್ದಿಷ್ಟಮುತ್ತರ ಭಾಗೇ ವೀರಶೈವ ಮತಂ ಪರಂ ॥
— ಸಿದ್ಧಾಂತ ಶಿಖಾಮಣಿ
ಶ್ರೀ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ
ಪರಶಿವನ ಪ್ರಥಮ ಮುಖವಾದ ಸದ್ಯೋಜಾತ ಮುಖದಿಂದ ಅವೀರ್ಭವಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮಲಯಾಚಲ ಪ್ರದೇಶದ, ಭದ್ರಾನದಿ ತಟದಲ್ಲಿ ಶ್ರೀ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸಂಸ್ಥಾಪಿಸಿದರು. ಮಹಾಮುನಿ ಅಗತ್ಯರಿಗೆ ಲಿಂಗದೀಕ್ಷೆ ನೀಡಿ, ಶಿವಾಮೃತ ಸಂದೇಶವಾದ ಶಕ್ತಿವಿಶಿಷ್ಟಿತ ಸಿದ್ಧಾಂತವನ್ನು ಅರುಹಿ ಉದ್ಧರಿಸಿದರು. ವೀರ ಎನ್ನುವ ಪದವನ್ನು ವೀರಶೈವ ಧರ್ಮ ಎಂಬ ಪದದ ಪೂರ್ವಾರ್ಧ ಭಾಗದಲ್ಲಿ ಕಾಣಬಹುದು. ವೀರ ಎಂಬ ಶಬ್ದವು ಜ್ಞಾನದಲ್ಲಿ ನೀರತನ, ವೀರವೃತ್ತಿ ಮತ್ತು ಶಿವಜೀವದ ಐಕ್ಯದ ವಿಶೇಷ ಅರ್ಥವನ್ನು ಸಾರುವ ಪದವಾಗಿದೆ. ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಗೊಂಡು ಧರ್ಮ ದುಂದುಭಿ ಮೊಳಗಿಸಿದ ಹಿರಿಮೆ ಶ್ರೀ ಪೀಠದ್ದು. ಇದುವರೆಗೂ ನೂರಿಪ್ಪತ್ತೊಂದು ಪರಮಾಚಾರ್ಯರ ಪಾದಸ್ಪರ್ಶದಿಂದ ಪುನೀತಗೊಂಡು ಬಾಗಿ ಬಂದ ಭಕ್ತರಿಗೆ ಮುಕ್ತಿಯನ್ನು, ಧರ್ಮದ ಸಾರವನ್ನು, ಜೀವನದ ವಾಸ್ತವಿಕತೆಯನ್ನು, ಸಿದ್ಧಾಂತದ ಸತ್ವವನ್ನು, ಸಂಸ್ಕೃತಿಯ ಸೊಗಡನ್ನು ತತ್ವಸಿದ್ಧಾಂತದ ತಳಹದಿಯ ಮೇಲೆ ಅರುಹಿ ಬಾಳಿಗೆ ಬೆಳಕನ್ನು ಅನುಗ್ರಹಿಸುತ್ತಲಿದೆ. ಪ್ರಸ್ತುತ ಪೀಠಾರೋಹಣ ಮಾಡಿರುವ ಪೃಥ್ವಿ ತತ್ವಾಧೀಶ, ಸಮೃದ್ಧಿಯ ಸಂಕೇತದ ಹಸಿರು ಧ್ವಜವನ್ನು ಪಿಡಿದು ಹೊರೆಯುತ್ತಿರುವ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ನಾಡಿನಾದ್ಯಂತ ದಣಿವರಿಯದೇ ನಿತ್ಯವೂ ಸಂಚರಿಸಿ ಧರ್ಮದ ಮಹತ್ತುಗಳನ್ನು ನಾಡಿನ ಜನಮನಕ್ಕೆ ಅರ್ಥಪೂರ್ಣವಾಗಿ ತಿಳಿಸುತ್ತಲಿದ್ದಾರೆ.
ಶ್ರೀ ಜಗದ್ಗುರು ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠ
ಜಗದೊಡೆಯನ ಎರಡನೇ ಮುಖವಾದ ವಾಮದೇವ ಮುಖದಿಂದ ಪ್ರಕಟಿತರಾದ ಶ್ರೀ ಜಗದ್ಗುರು ದಾರುಕಾಚಾರ್ಯ ಭಗವತ್ಪಾದರು ಮದ್ಯಪ್ರದೇಶದ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿ ಅವತರಿಸಿ ಉಜ್ಜಯಿನಿ ಮಹಾಕ್ಷೇತ್ರದಲ್ಲಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸ್ಥಾಪಿಸಿದರು. ಜಲತತ್ವದ ಒಡೆಯರಾಗಿ, ತ್ಯಾಗದ ಸಂಕೇತವಾದ ಕೆಂಪು ವರ್ಣದ ಬಾವುಟವನ್ನು ಹಿಡಿದು ತ್ಯಾಗಮೂರ್ತಿಗಳಾಗಿರುವರು. ಸದ್ಧರ್ಮ ಎಂಬ ಅಂಕಿತವು ಸತ್ಯವಾದ ಧರ್ಮವನ್ನು ಬೋಧಿಸುವುದಾಗಿದೆ ಮತ್ತು ಅದರಂತೆ ಪಾಲಿಸುವುದಾಗಿದೆ. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರ ಧರ್ಮ ಜಾಗೃತಿಯ ಕಾವ್ಯಗಳು ದಿನೇ ದಿನೇ ಉತ್ತಮ ರೂಪ ಪಡೆದುಕೊಂಡು ಸಾಗುತ್ತಲಿದೆ. ಸಕಲರಿಗೂ ಧರ್ಮ-ಸಂಸ್ಕೃತಿಗಳ ಕಂಪು ಇಂಪಾಗುವಂತೆ ಮಾಡಿದೆ.
ಶ್ರೀ ಜಗದ್ಗುರು ಕೇದಾರ ವೈರಾಗ್ಯಸಿಂಹಾಸನ ಮಹಾಸಂಸ್ಥಾನ ಪೀಠ
ಮುಕ್ಕಣ್ಣನ ಮೂರನೇಯ ಅಘೋರ ಮುಖದಿಂದ ಶ್ರೀ ಜಗದ್ಗುರು ಘಂಟಾಕರ್ಣಾಚಾರ್ಯರು ದ್ರಾಕ್ಷಾರಾಮದ ಶ್ರೀ ರಾಮನಾಥ ಲಿಂಗದಿಂದ ಅವತರಿಸಿ ಉತ್ತರಾಂಚಲ ರಾಜ್ಯದ ಕೇದಾರ ಕ್ಷೇತ್ರದಲ್ಲಿ ವೈರಾಗ್ಯ ಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಕಟ್ಟಿದರು. ಶಿವ-ಜೀವರ ಐಕ್ಯದ ಸನ್ನಿವೇಶದಲ್ಲಿ ಶಿವತತ್ವ ಪ್ರಾಪ್ತಿಗಾಗಿ ಶಿವಜ್ಞಾನ, ಶಿವಧ್ಯಾನ, ಶಿವವ್ರತ, ಶಿವೋಪಾಸನೆ, ಶಿವಪೂಜೆ ಎನ್ನುವ ಪಂಚಪರಿಕರಗಳನ್ನು ಸಾಧಿಸುವಾಗ ಉಂಟಾಗುವ ಅರಿಷಡ್ ವರ್ಗಗಳ, ಸಪ್ತವ್ಯಸನಗಳ ಮತ್ತು ಅಷ್ಟಮದಗಳ ನಿಯಂತ್ರಣವನ್ನು ವೈರಾಗ್ಯದ ಮೂಲಕವಾಗಿ ಗೆದ್ದು ಶಿವನಲ್ಲಿ ಒಂದಾಗುವ ಬಗೆಯನ್ನು ಶ್ರೀ ಪೀಠವು ತಿಳಿಸುತ್ತದೆ. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ರಾವಲ್ ಪದವಿಭೂಷಿತ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಅಮೃತ ಸದೃಶ ಧರ್ಮ ಬೋಧಾಮೃತತ್ವದ ಸಾಧನಾ ಕ್ರಮದಿಂದಾಗಿ ಲೋಕೋದ್ಧಾರದ ಕಾರ್ಯಗಳು ಅದ್ದೂರಿಯಾಗಿ ತತ್ವಗಳ ತಳಹದಿಯ ಮೇಲೆ ನಡೆಯುತ್ತಿವೆ.
ಶ್ರೀ ಜಗದ್ಗುರು ಶ್ರೀಶೈಲ ಸೂರ್ಯಸಿಂಹಾಸನ ಮಹಾಸಂಸ್ಥಾನ ಪೀಠ
ಪಶುಪತಿಯ ಚತುರ್ಮುಖದಿಂದ ಉದಯರಾದ ಶ್ರೀ ಜಗದ್ಗುರು ಧೇನುಕರ್ಣಾಚಾರ್ಯರು ಆಂಧ್ರಪ್ರದೇಶ ರಾಜ್ಯದ ಶ್ರೀಶೈಲ ಕ್ಷೇತ್ರದಲ್ಲಿ ಸೂರ್ಯಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸ್ಥಾಪಿಸಿದರು. ಜಗತ್ತಿಗೇ ಬೆಳಕು ನೀಡುವ ಸೂರ್ಯನ ತೆರದಿ, ಸೂರ್ಯಸದೃಶವಾದ ಜ್ಞಾನದ ಪ್ರಭೆಯನ್ನು ಜನರ ಅಂಧಕಾರದ ಬದುಕಿಗೆ ನೀಡಿ, ಸುಜ್ಞಾನದ ಚಿತ್ಕಳೆಯನ್ನು ತುಂಬುತ್ತಲಿರುವ ಶ್ರೀ ಪೀಠವು ಮನದ ಮಲೀನತೆಯನ್ನು ತೊಳೆದು, ಸತ್ಯ ಝೇಂಕಾರದ ನಿನಾದವನ್ನು ಬಿತ್ತರಿಸುತ್ತಿದೆ. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಧರ್ಮದ ಹೆದ್ದಾರಿಯಲ್ಲಿ ಜನರನ್ನು ಸುಸಂಸ್ಕೃತರನ್ನಾಗಿಸಿ ಕರೆದೊಯ್ಯುತ್ತಿದ್ದಾರೆ.
ಶ್ರೀ ಜಗದ್ಗುರು ಕಾಶಿ ಜ್ಞಾನಸಿಂಹಾಸನ ಮಹಾಸಂಸ್ಥಾನ ಪೀಠ
ಈಶ್ವರನ ಐದನೇ ಈಶಾನ ಮುಖದಿಂದ ಉದ್ಭವರಾದ ಶ್ರೀ ಜಗದ್ಗುರು ವಿಶ್ವಕರ್ಣಾಚಾರ್ಯರು ಉತ್ತರಪ್ರದೇಶ ರಾಜ್ಯದ ಕಾಶೀ ಕ್ಷೇತ್ರದ ವಿಶ್ವನಾಥ ಲಿಂಗದಿಂದವತರಿಸಿ, ಅಲ್ಲಿಯೇ ಜ್ಞಾನಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸ್ಥಾಪಿಸಿದರು. ಜೀವಾತ್ಮರಿಗೆ ಅಂಟಿದ ಅಜ್ಞಾನದ ಬಂಧವನ್ನು ಬಿಡಿಸಬೇಕಾದರೆ, ಜ್ಞಾನದ ಸ್ವರೂಪನಾದ ಗುರುವಿನ ಮಹಾಮಾರ್ಗದರ್ಶನ ಬೇಕು. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಧರ್ಮದ ಮೂಲವನ್ನು ನಾಡಿನ ಜನರ ಮನ ಮನೆಯತ್ತ ಧಾವಿಸಿ ತಳ-ತಿರುಳನ್ನು ತಿಳಿಸುತ್ತಿರುವರು. ಮಹಾನಂದದ ಬದುಕನ್ನು ದೊರಕಿಸುತ್ತಿರುವರು.
ವೀರಶೈವ ಧರ್ಮದ ಮಹಾಮನೆಯಲ್ಲಿ ಕಂಡುಬರುವ ವಿಶ್ವವಿಕಾಸ ತತ್ವಗಳನ್ನು ಒಮ್ಮೆ ಅವಲೋಕಿಸಿದಾಗ ಆದಿಯಿಂದ ಪಂಚಪೀಠಗಳಿಗೆ ಸರ್ವರೂ ಪ್ರಧಾನ ಮಾನ್ಯತೆ ನೀಡಿರುವುದನ್ನು ಸ್ಪಷ್ಟಿಕರಿಸಬಹುದಾಗಿದೆ. ಸನಾತನ ಪಂಚಪೀಠಗಳು ಸಾಗರದಾಚೆ ಅಲ್ಲದೇ ಹಿಮಾಲಯದಾಚೆಗೂ ತಮ್ಮ ಶಾಖೋಪಶಾಖೆಗಳನ್ನು ಹೊಂದಿ ಸಹಸ್ರ ಸಹಸ್ರ ವರ್ಷಗಳಿಂದ ಧರ್ಮ ಪ್ರಸಾರ, ಪ್ರಚಾರ ಮತ್ತು ರಕ್ಷಣಾ ಕಾರ್ಯವನ್ನು ತಾತ್ವಿಕ ಬದ್ಧತೆಯಲ್ಲಿ ನಡೆಸಿಕೊಂಡು ಬಂದಿರುವುದು ಇತಿಹಾಸ ಪ್ರಸಿದ್ಧವಾಗಿದೆ. ಇಂತಹ ಪರಮ ಪೀಠಗಳ ಪಾವನಮಯ ಪರಂಪರೆಯು ಇಂದು-ಮುಂದು ಎಂದೆಂದೂ ಭವ್ಯತೆಯಿಂದ ಮುಂದುವರಿಯುವುದಾಗಿದೆ.
ಶ್ರೀಮದ್ ವೀರಶೈವ
ವಾಗರ್ಥಾವಿವ ಸಂತೃಕ ವಾಗರ್ಥಪ್ರತಿಪತ್ತಯೇ।
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರ್॥
— ಕಾಳಿದಾಸ
ವೀರಶೈವ ಧರ್ಮ ಅತ್ಯಂತ ಪ್ರಾಚೀನ. ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವ, ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸಿದ ಧರ್ಮ ತಾನೊಬ್ಬನೇ ಬದುಕಿ ಬಾಳಬೇಕೆಂಬ ಸ್ವಾರ್ಥ ಸಂಕುಚಿತ ಮನೋಭಾವನೆಗಳು ಇಲ್ಲಿಲ್ಲ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಶ್ರೇಷ್ಠವೆಂದು ಸಾರಿದೆ. ಗಂಡು ಹೆಣ್ಣು, ಉಚ್ಚನೀಚ, ಬಡವ ಬಲ್ಲಿದ ಎಂಬ ಭೇದವಿಲ್ಲದೇ ಎಲ್ಲರಿಗೂ ಧಾರ್ಮಿಕ ಸಂಸ್ಕಾರ ಸದ್ವಿಚಾರಗಳನ್ನು ಕೊಟ್ಟ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ.
ವೀರಶೈವ ಧರ್ಮಕ್ಕೆ ಸಂವಿಧಾನ, ಆಚಾರ ಸಂಹಿತೆ ಮತ್ತು ಸಿದ್ಧಾಂತಗಳಿವೆ. ಅಷ್ಟಾವರಣದೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಷಟ್ ಸ್ಥಲಗಳೇ ಆತ್ಮವಾಗಿರುವ ವೀರಶೈವ ಧರ್ಮ ಸಂಸ್ಕೃತಿಯನ್ನು ಶಿವಾಗಮಗಳಲ್ಲಿ ಕಾಣಬಹುದು. ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ
ಸಿದ್ಧಾಂತಾ ಮಹಾತಂತೇ ಕಾಮಿಕಾ ಶಿವೋದಿತೇ
ನಿರ್ದಿಷ್ಟಮುತ್ತರೇ ಭಾಗೇ ವೀರಶೈವ ಮತಂ ಪರಂ
ಎಂದು ಸಾರಿದೆ. ಕಾಮಿಕಾದಿ ವಾತುಲಾಂತವಾದ ಇಪತ್ತೆಂಟು ಶಿವಾಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆಯನ್ನು ಕಾಣಬಹುದು. ಐದು ಸಾವಿರ ವರುಷಗಳ ಇತಿಹಾಸವುಳ್ಳ ವೀರಶೈವ ಧರ್ಮದಲ್ಲಿ ಜಾತಿಯತೆ, ಸ್ತ್ರೀ ಪುರುಷ ಅಸಮಾನತೆ, ಮೂಢನಂಬಿಕೆ ಕಂದಾಚಾರಗಳನ್ನು ನಿರಾಕರಿಸಿ, ಸರ್ವ ಸಮಾನತೆಯನ್ನು ಸಾರುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ.
ಅಗಸ್ಯ, ದಧೀಚಿ, ವ್ಯಾಸ, ಸಾನಂದ, ದೂರ್ವಾಸ ಮಹರ್ಷಿಗಳು ಶಿವಾದೈತ ತತ್ವ ಸಿದ್ಧಾಂತಗಳನ್ನು ಪರಿಪಾಲಿಸಿ ಪಾವನರಾದರು. ಶಿವಾಗಮಗಳು, ಸಿದ್ಧಾಂತ ಶಿಖಾಮಣಿ, ಕ್ರಿಯಾಸಾರ, ಶ್ರೀಕರಭಾಷ್ಯ, ಶಿವಾ ತಮಂಜರಿ ಮೊದಲ್ಗೊಂಡು ಹಲವಾರು ಅಮೂಲ್ಯ ಗ್ರಂಥಗಳು ವೀರಶೈವ ಧರ್ಮದ ಪಾವಿತ್ರ್ಯತೆಯನ್ನು ಹೆಚ್ಚಿಸಿವೆ. ಕಾಯಕ ಮತ್ತು ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ಅಂಗ ಅವಗುಣಗಳನ್ನು ನೀಗಿ ಲಿಂಗಗುಣ ಸಂಪನ್ನರನ್ನಾಗಿ ಮಾಡಿದ ಕೀರ್ತಿ ಇದರದು. ದೇಹವನ್ನೇ ದೇವಾಲಯ ಮಾಡಿ ಗುರುಕೊಟ್ಟ ಇಷ್ಟಲಿಂಗವೇ ಆರಾಧ್ಯ ದೈವವೆಂದು ಪೂಜಿಸಿದ ಧರ್ಮ ವೀರಶೈವವಾಗಿದೆ.
ವೀರಶೈವ ಧರ್ಮವು ಜಾತಿ ಜಂಜಡಗಳ ಬೇರು ಕಿತ್ತು ಸಾಮರಸ್ಯದ ಸಂದೇಶ ನೀಡಿದೆ. ಜೀವ ಶಿವನಾಗುವ, ಅಂಗ ಲಿಂಗವಾಗುವ, ಭವಿ ಭಕ್ತನಾಗುವ ಪದಾರ್ಥ ಪ್ರಸಾದವನ್ನಾಗಿಸುವ, ಕರ್ಮ ಧರ್ಮವನ್ನಾಗಿಸುವ, ಜಲನೆಲ ತೀರ್ಥಕ್ಷೇತ್ರಗಳೆಂದು ಸಾರಿದ ವಿಶೇಷತೆಯನ್ನು ಈ ಧರ್ಮದಲ್ಲಿ ಕಾಣಬಹುದು. ಜ್ಞಾನ ಕರ್ಮ ಸಮುಚ್ಛಯದಿಂದ ಕೂಡಿದ ವೀರಶೈವ ಧರ್ಮದಲ್ಲಿ ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಸ್ಥಾವರಕ್ಕಿಂತ ಜಂಗಮಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದೆ.
ವೀರಶೈವ ಧರ್ಮದ ಪರಿಚಯ
ವೀರಶೈವ ಧರ್ಮವು ಪರಶಿವನಲ್ಲಿ ಭಕ್ತಿ, ದೇಹದ ಮೇಲೆ ಇಷ್ಟಲಿಂಗ ಧರಿಸುವಿಕೆ (ಲಿಂಗಧಾರಣ), ಮತ್ತು ಪಂಚಾಚಾರಗಳ (ಲಿಂಗಾಚಾರ, ಸದಾಚಾರ, ಶಿವಾಚಾರ, ಭೃತ್ಯಾಚಾರ ಮತ್ತು ಗಣಾಚಾರ) ಪಾಲನೆಗೆ ಒತ್ತು ನೀಡುವ ಅತ್ಯಂತ ಪುರಾತನ ಶೈವ ಪರಂಪರೆಯಾಗಿದೆ.
ಶ್ರೀ ಜಗದ್ಗುರು ಪಂಚಾಚಾರ್ಯರ ತತ್ವಜ್ಞಾನ ಮತ್ತು ವೀರಶೈವ ಧರ್ಮದ ಸಾರವನ್ನು ವಿವರಿಸುವ ಸಿದ್ಧಾಂತ ಶಿಖಾಮಣಿ ವೀರಶೈವರ ಪರಮ ಪವಿತ್ರ ಗ್ರಂಥವಾಗಿದೆ. ಶಿವನ ಐದು ಮುಖಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಮುಖಗಳಿಂದ ಜಗದ್ಗುರುಗಳು ಅವತರಿಸಿ ಭಾರತದಾದ್ಯಂತ ಈ ಪಂಚಪೀಠಗಳನ್ನು ಸ್ಥಾಪಿಸಿದರು ಎಂಬ ನಂಬಿಕೆ ಇದೆ.